ಕ್ರೈನಮ್
ಅಮರಿಲ್ಲಿಡೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯಜಾತಿ. ದೊಡ್ಡಗಾತ್ರದ ಬೆಡಗಿನ ಹೂಗಳನ್ನು ಬಿಡುವುದರಿಂದ ಇದನ್ನು ಅಂಚುಸಸ್ಯ ಇಲ್ಲವೆ ಕುಂಡಸಸ್ಯವನ್ನಾಗಿ ಬೆಳೆಸುತ್ತಾರೆ. ಹೂವಿನ ಅಂದಕ್ಕೆ ಪೂರಕವಾಗುವಂತೆ ಇದರ ಎಲೆಗಳೂ ಚೆಲುವಾಗಿರುವುದರಿಂದ ಕ್ರೈನಮಿನ ಹಿರಿಮೆ ಮತ್ತಷ್ಟು ಹೆಚ್ಚಿದೆ.

	ಅಮರಿಲ್ಲಿಸ್ ಸಸ್ಯಕ್ಕೆ ಹತ್ತಿರದ ಸಂಬಂಧಿಯಿದು. ಅದರಂತೆಯೆ ಕ್ರೈನಮಿನಲ್ಲೂ ಭೂಗತವಾದ ಗೆಡ್ಡೆಯಿದೆ. ಗೆಡ್ಡೆಯ ಗಾತ್ರ ಮತ್ತು ಆಕಾರ ಕ್ರೈನಮಿನ ವಿವಿಧ ಪ್ರಭೇದಗಳಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ; ಕೆಲವದರಲ್ಲಿ ಕೇವಲ ಕೆಲವು ಇಂಚುಗಳಷ್ಟು ಉದ್ದವಾಗಿದ್ದರೆ ಮಿಕ್ಕವುಗಳಲ್ಲಿ 2'-3' ಉದ್ದ ಇರುವುದುಂಟು. ಕೆಲವು ಪ್ರಭೇದಗಳ ಗೆಡ್ಡೆ ಬುಡದಲ್ಲಿ ಕೊಂಚವೇ ದಪ್ಪವಾಗಿದ್ದು ತುದಿಯ ಕಡೆಗೆ ಕ್ರಮೇಣ ಸಣ್ಣದಾಗುತ್ತ ಹೋಗುತ್ತದೆ. ಇನ್ನು ಕೆಲವು ಪ್ರಭೇದಗಳಲಿ ಈರುಳ್ಳಿ ಗೆಡ್ಡೆ ಆಕಾರದ ಗೆಡ್ಡೆಯಿದೆ. ಗೆಡ್ಡೆಯ ಸುತ್ತ ಈರುಳ್ಳಿ ಗೆಡ್ಡೆಯಲ್ಲಿರುವಂತೆ ಹಲವಾರು ಎಲೆಗಳ ಬುಡಗಳ ಹೊದಿಕೆಯಿದೆ. ಗೆಡ್ಡೆಯಿಂದ ಉದ್ದವಾದ ಅನೇಕ ಎಲೆಗಳು ಮೇಲ್ಮುಖವಾಗಿ ಬೆಳೆಯುತ್ತವೆ. ಎಲೆಗಳು ಅಗಲವಾಗಿಯೂ ಹಲವಾರು ಅಡಿಗಳಷ್ಟು ಉದ್ದವಾಗಿಯೂ ಇವೆ. ಹೂಗಳು ಛತ್ರಮಂಜರಿ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಒಂದೊಂದು ಗೊಂಚಲಲ್ಲೂ ಕೇವಲ ಕೆಲವು ಹೂಗಳಿಂದ ಹಿಡಿದು ಅನೇಕ ಹೂಗಳಿರಬಹುದು. ಹೂಗಳ ಬುಡವನ್ನು ಆವರಿಸುವಂತೆ ಎರಡು ಉಪಪತ್ರಗಳಿವೆ (ಬ್ರಾಕ್ಟ್ಸ್). ಹೂಗಳ ಬಣ್ಣ ಪ್ರಮುಖವಾಗಿ ಮೂರು ಬಗೆಯದು. ಅಚ್ಚ ಬಿಳಿ, ಬಿಳಿಯಾಗಿದ್ದು ಕೇಂದ್ರಭಾಗದಲ್ಲಿ ಕೆಂಪು ಇಲ್ಲವೆ ಉದಾ ಬಣ್ಣದ ಪಟ್ಟೆಯಿರುವುದು ಅಥವಾ ಗುಲಾಬಿ ಇಲ್ಲವೆ ಉದಾ. ಹೂಗಳಿಗೆ ನವುರಾದ ಸುವಾಸನೆಯೂ ಉಂಟು. ದಳಗಳಾಗಲಿ ಪುಷ್ಪಪತ್ರಗಳಾಗಳಿ ಬೇರೆಬೇರೆಯಾಗಿಲ್ಲ. ಎರಡು ಭಾಗಗಳೂ ಒಂದುಗೂಡಿ ಪೆರಿಯಾಂತ್ ಎಂಬ ಭಾಗವಾಗಿವೆ. ಇದು ಬುಡದಲ್ಲಿ ಕೂಡಿಕೊಂಡಿದ್ದು ಅಂಚಿನಲ್ಲಿ 6 ಭಾಗಗಳಾಗಿ ಸೀಳಿದೆ. ಪೆರಿಯಾಂತಿನ ಆಕಾರ ಆಲಿಕೆಯಂತೆ ಇಲ್ಲವೆ ತಟ್ಟೆಯಂತೆ. ಕೇಸರಗಳು 6. ಇವುಗಳ ದಂಡ ಪೆರಿಯಾಂತಿನ ಗಂಟಲಿಗೆ ಅಂಟಿಕೊಂಡಿದೆ. ಅಂಡಾಶಯ ನೀಚ ಸ್ಥಾನದ್ದು. ಮೂರು ಕಾರ್ಪೆಲುಗಳಿಂದ ಕೂಡಿದೆ. ಫಲ ಸಂಪುಟ ಮಾದರಿಯದು. ಬೀಜಗಳು ದೊಡ್ಡಗಾತ್ರದವು; ದಪ್ಪವಾಗಿಯೂ ಹಸಿರಾಗಿಯೂ ಇವೆ.

	ಕ್ರೈನಮಿನಲ್ಲಿ ಸುಮಾರು 100 ಪ್ರಭೇದಗಳಿವೆ. ಇವುಗಳಲ್ಲಿ ಬಹುಪಲು ಉಷ್ಣ ದೇಶಗಳ ನಿವಾಸಿಗಳು. ಅಲಂಕಾರಕ್ಕಾಗಿ ಸಮಶೀತೋಷ್ಣ ಇಲ್ಲವೆ ತಂಪು ಹವೆಯುಳ್ಳ ದೇಶಗಳಲ್ಲಿ ಇವನ್ನು ಬೆಳೆಸುವುದಿದ್ದರೂ ಉಷ್ಣ ದೇಶಗಳಲ್ಲಿ ಬೆಳೆದಷ್ಟು ಚೆನ್ನಾಗಿ ಬೆಳೆಯಲಾರವು. ಅಲ್ಲದೆ ತಂಪು ಹವೆಯ ಪ್ರದೇಶಗಳಲ್ಲಿ ಬೇಸಗೆಯಲ್ಲಿ ಮಾತ್ರ ಇವುಗಳ ಬೆಳವಣಿಗೆ ಹುಲುಸು. ಕ್ರೈನಮಿನ ವಿವಿಧ ಪ್ರಭೇದಗಳನ್ನು ಸ್ಥೂಲವಾಗಿ ಎರಡು ಬಗೆಗಳಾಗಿ ವಿಂಗಡಿಸಬಹುದು. 1 ತೆಳುಗೆಡ್ಡೆಯಿದ್ದು ಸದಾ ಹಸಿರಾಗಿರುವ ಹಾಗೂ ನಕ್ಷತ್ರದಾಕೃತಿಯ ಹೂ ಬಿಡುವ ಬಗೆ. 2 ದಪ್ಪ ಹಾಗೂ ಗುಂಡನೆಯ ಗೆಡ್ಡೆ ಮತ್ತು ವರ್ಷಕ್ಕೊಮ್ಮೆ ಉದುರುವ ಎಲೆಗಳು ಇದ್ದು ಗಂಟೆಯಾಕಾರದ ಹೂ ಬಿಡುವ ಬಗೆ. ಉದ್ಯಾನ ಪ್ರಾಮುಖ್ಯವಿರುವ ಪ್ರಭೇದಗಳು ಇವು. ಕ್ರೈ, ಆಗಸ್ಟಮ್, ಕ್ರೈ, ಏಷ್ಯಾಟಿಕಮ್, ಕ್ರೈ, ಮೋರಿಯೈ, ಕ್ರೈ, ಪಾವೆಲಿಯೈ, ಕ್ರೈ, ಅಮೆರಿಕಾನಮ್, ಕ್ರೈ, ಜೈಗಾಂಶಿಯಮ್, ಕ್ರೈ, ಲ್ಯಾಟಿ ಫೋಲಿಯಮ್, ಕ್ರೈ, ಲಾಂಜಿಫೋಲಿಯಮ್.

	ಕ್ರೈನಮ್ ಜಾತಿಯ ಸಸ್ಯಗಳನ್ನು ಗೆಡ್ಡೆಗಳಿಂದ ಹೊರಡುವ ಚಿಕ್ಕ ಶಾಖೆಗಳಿಂದ ವೃದ್ಧಿಸಬಹುದು.

	ಇದು ಮೈದಾನ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯಬೇಕಾದರೆ ನೆರಳು ವಾತಾವರಣವನ್ನು ಕಲ್ಪಿಸಬೇಕು. ಇದು ವಿಶಾಲವಾದ ಬೇರು ಬಿಡುವುದರಿಂದ ಇದನ್ನು ಕುಂಡಗಳಲ್ಲಿ ಬೆಳೆಸುವಾಗ 18" ಎತ್ತರದ ಕುಂಡಗಳನ್ನು ಉಪಯೋಗಿಸಬೇಕು. ಧಾರಾಳವಾದ ಗಾಳಿ, ಸೂರ್ಯನ ಬೆಳಕು, ಸಡಿಲವಾದ ಫಲವತ್ತಾದ ಮಣ್ಣು ಮತ್ತು ಹೆಚ್ಚು ತೇವಾಂಶ ಅಗತ್ಯ. ಶಾಖೆಗಳನ್ನು ನಾಟಿ ಮಾಡಲು ಅಕ್ಟೋಬರ್ ತಿಂಗಳು ಯೋಗ್ಯವಾದ ಕಾಲ. 			(ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ